Tuesday, November 13, 2012

ಕೃಷಿ ಯಂತ್ರೊಪಕರಣ ಮಟ್ಟಿಗೆ ನಮ್ಮಲ್ಲಿ ಇನ್ನೂ ಗುಲಾಮಗಿರಿ


ಪುತ್ತೂರಿಗೆ   ಯಂತ್ರ  ಮೇಳ  ನೋಡಲು ಬಂದ  ದೇವಕಿ  -  ಅಶೋಕವರ್ಧನರು  ವಾಪಾಸಾಗುವಾಗ  ನನ್ನಲ್ಲಿಗೆ    ಬಂದರು.  ಮೇಳದ  ಬಗ್ಗೆ    ಅವರಿಗೆ  ನಿರಾಶೆಯಾಗಿತ್ತು.  ಹಾಗೊಂದು ಪತ್ರವನ್ನೂ  ಆಮೇಲೆ  ನನಗೆ    ಬರೆದರು.  ಅದನ್ನೇ   ವಿಸ್ತರಿಸಿ   ಕೃಷಿಕರಿಗೊಲಿಯದ ಯಂತ್ರ ಮೇಳ  ಎಂದೇ  ಹೆಸರಿಸಿ    ಅವರ  ಬ್ಲೋಗಿಗೆ ಏರಿಸಿದರು.  ಹಲವಾರು ವರ್ಷಗಳಿಂದ  ಇದರ  ಅರಿವು  ಇದ್ದ   ನನಗೆ  ಆಶ್ಚರ್ಯವೇನೂ  ಆಗಲಿಲ್ಲ.     ಅವರಿಗೆ ಉತ್ತರ  ಬರೆಯಲು ಕೂತವನಿಗೆ  ಹಲವು ವಿಚಾರಗಳು  ಮನಸ್ಸಿಗೆ   ಬಂದವು.  ಹಾಗೆ    ಪೇಸ್ ಬುಕ್ನಲ್ಲಿ ಕಂಡ   ಕೊಂಕೋಡಿಯವರ  ಅಂತರಾಷ್ಟ್ರೀಯ   ಯಂತ್ರ    ಮೇಳದ ಪ್ರಸ್ತಾಪವೂ  ನನ್ನ  ಕೆಣಕಿತು.   :@  ಯಾಕೆಂದರೆ  - 

ಪರದೇಶದಲ್ಲಿ   ಹಿರಿಯ    ಸಾವಯುವ  ಕೃಷಿಕರಿಂದ  ಉಗಿಸಿಕೊಂಡ  ಅನುಭವ    ನನಗಿದೆ. :f  ಯಾಕೆಂದರೆ  ಅವರ  ನಂಬಿಕೆಯಲ್ಲಿ  ಸಾವಯುವ   ಬೇಸಾಯ   ಕಲಿಯಲು  ಅಮೇರಿಕದಿಂದ  ಬಾರತಕ್ಕೆ  ಬರಬೇಕು  ಹೊರತು  ನಮ್ಮಲ್ಲಿಂದ  ಅಮೇರಿಕಕ್ಕೆ  ಹೋಗುವುದು   ಅಲ್ಲವೇ  ಅಲ್ಲ  ಎಂದು  ಉಗಿದಿದ್ದರು     ಪೌಲ್  ಕೀನೆ.  ಪೌಲ್  ಕೀನೆ  ಬಾರತದಲ್ಲಿ  ಕೆಲಕಾಲ  ಕಳೆದಿದ್ದರು ಮತ್ತು  ನಾನು ಬೇಟಿ ಮಾಡೋವಾಗ  ಪೆನ್ಸಿಲ್ವಾನಿಯ  ರಾಜ್ಯದಲ್ಲಿ  ವಾಲ್ನಟ್  ಎಕ್ರೆಸ್  ಅನ್ನುವ  ಪ್ರಖ್ಯಾತ  ಸಾವಯುವ   ಕೃಷಿ ಕ್ಷೇತ್ರದ  ಯಜಮಾನರಾಗಿದ್ದರು.  ಹಾಗೆ  ಅಂತರಾಷ್ಟ್ರೀಯ  ಯಂತ್ರ  ಮೇಳ  ಅನ್ನುವಾಗ  ಸ್ವಾಬಾವಿಕವಾಗಿ  ಮೈಯೆಲ್ಲ  ಉರಿಯಿತು.  ಕೆಳಗೆ   ಕಾಪಿ ಮಾಡಿರುವ    ಪ್ರತಿಕ್ರಿಯೆ  ಬರೆಸಿತು.     -

ಯಂತ್ರಗಳ ಮಟ್ಟಿಗೆ ನಾವಿನ್ನೂ ಗುಲಾಮಗಿರಿ ಅನುಬವಿಸುತ್ತಿದ್ದೇವೆ. ಅದುದರಿಂದ ಅಂತರಾಷ್ಟ್ರೀಯ ಮಟ್ಟದ ಯಂತ್ರ ಮೇಳ ನಮಗೆ ಬೇಕಾದುದಲ್ಲ.  ನಿಜಕ್ಕೂ   ಅಗತ್ಯವಾದ ಯಂತ್ರಗಳ ವಿ ಟೆಕ್ ವಿಶ್ವನಾಥ್ ಆಂತಹ   ಉತ್ಸಾಹಿಗಳು   ತರುತ್ತಾರೆ.  ಅವರಿಗೆ   ಸಹಾಯ ಕೊಟ್ಟರೆ ಸಾಕು.

ಆದರೆ ಪ್ರಮುಖ ವಿಚಾರ ಒಂದಿದೆ - ಅಡಿಕೆ ತೆಂಗು ಬೆಳೆಯದ ದೇಶಕ್ಕೆ ಹೋಗಿ ನಮಗೆ ಬೇಕಾದ ಯಂತ್ರ ಹುಡುಕಿದರೆ ಮನೆಯಲ್ಲಿ ಕಳಕೊಂಡ ಮುತ್ತನ್ನು ಬೆಳಕಿರುವಲ್ಲಿ ಹುಡುಕಿದ ಅಜ್ಜಿಯ ಕಥೆಯೇ ಆಗುತ್ತದೆ. ಅಮೇರಿಕದಂತಹ ದೇಶಗಳಲ್ಲಿ ಈ ಯಂತ್ರ ಮೇಳಗಳು   ಮಾತ್ರವಲ್ಲ    ಸಾಮಾನ್ಯ ರೈತರು ಪಾಲ್ಗೊಳ್ಳುವ   ರೈತ ಸಂತೆಗಳೂ  ಆಗುತ್ತವೆ.  . ಅಂತಹ ರೈತ ಸಂತೆಗಳು   ನಮ್ಮಲ್ಲೂ   ಆಗಬೇಕು, ಹೊರತು  ಬೃಹತ್  ಮೇಳಗಳಲ್ಲ.    ಅದರಲ್ಲಿ   ತಳಮಟ್ಟದ  ಮಾಹಿತಿ  ಇರುವ   ತುಕ್ರ ಚೋಮರೂ ಪಾಲ್ಗೊಳ್ಳುವಂತಾಗಬೇಕು. ಆಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.     

ಹಿಂದೆ ನಾವು ಕೆಲಸ ಮಾಡಿಸುತ್ತಿದ್ದೆವು ಆದರೆ ಸಲಕರಣೆ ಕೊಳ್ಳುವ ತೀರ್ಮಾನ ನಮ್ಮದಾಗಿತ್ತು. ಸ್ವಾಬಾವಿಕವಾಗಿ ಕೊಟ್ಟು ಪಿಕ್ಕಾಸಿನಿಂದ ಮುಂದೆ ಹೋಗಲಿಲ್ಲ. ಮುಂದೊಂದು ಉದಾಹರಣೆ ಕೊಡುತ್ತೇನೆ.

ಎಲ್ಲ  ಕೆಲಸಗಳಲ್ಲೂ ಯಂತ್ರ ಮನುಷ್ಯನನ್ನು ಸೋಲಿಸಬಹುದು ಎನ್ನುವ ಬಲವಾದ ವಾದ ನಮ್ಮಲ್ಲ್ಲಿದೆ. ದಯವಿಟ್ಟು  ಕೆಳಗಿರುವ ವಿಡಿಯೊ    ನೋಡಿ - ಇಂತಹ ಬೀಸುಗತ್ತಿ ಯುರೋಪಿನ ಹೊಲದಲ್ಲಿ ಉಪಯೋಗಿಸಿ ನೋಡಿದ್ದೇನೆ. ಒಂದೇ ದಿನದಲ್ಲಿ ಬೀಸುವಿಕೆ ಅಬ್ಯಾಸವಾಗದಿದ್ದರೂ ಉಪಯುಕ್ತ ಅನ್ನಿಸಿತ್ತು.   ಒಂದು ಬೀಸುಗತ್ತಿ ನಾನು ಹಿಡಿದುಕೊಂಡಿರುವುದರ    ಪೋಟೊ ನನ್ನ ಸೈಕಲು ಯಾತ್ರೆ ಆಲ್ಬಂನಲ್ಲಿತ್ತು.     ಆಲ್ಬಂ  ನೋಡಿದವರು    ಯಾರೂ  ಅದನ್ನು    ಗಮನಿಸಲೇ ಇಲ್ಲ.   ಅದರಲ್ಲಿ ಅಶ್ಚರ್ಯವೂ  ಇಲ್ಲವೆನ್ನಿ.  



ಈಗ ನಮ್ಮಲ್ಲಿ ಪೆಟ್ರೊಲ್ ಚಾಲಿತ ಯಂತ್ರ ಬಂದಿದೆ. ಬೀಸುಗತ್ತಿ ಬಂದಿಲ್ಲ. ಎಲ್ಲ ವಿಚಾರಗಳೂ ಅಷ್ಟೇ. ಯೋಚಿಸಿ ನೋಡಿ - ಮಾರಾಟದಲ್ಲಿ ಲಾಬ ಇರುವುದು, ದುಬಾರಿ ಸವೆಯುವ ಬಾಗಗಳ ಬಿಡಿಬಾಗಗಳ ಲೆಕ್ಕದಲ್ಲಿ ಹಣ ಬರೋದು ಹಾಗೂ ಸಬ್ಸಿಡಿ ದೊರಕುವುದು ಪೆಟ್ರೊಲ್ ಚಾಲಿತ ಮಾದರಿಗೆ ಮಾತ್ರ. ನಾವೀಗ  ನಮ್ಮ  ಅಗತ್ಯ ಉಪಕರಣಗಳ   ಹುಡುಕಬೇಕಾದ್ದು ಅಮೇರಿಕ ಇಸ್ರೇಲ್ ಚೀನಾದಲ್ಲಲ್ಲ, ನಮ್ಮ ಹಿತ್ತಲಿನಲ್ಲಿ   -     ಎಂದು ಬರೆದಿದ್ದೆ. 

ಈಗ  ಕಳೆ ಕೀಳುವ  ಯಂತ್ರದವರು  ಗಂಟೆಗೆ   ೧೭೦ ರೂಪಾಯಿ ಬಾಡಿಗೆ ಪಡಕೊಳ್ಳುತ್ತಾರೆ.  ಈ  ಬೀಸುಗತ್ತಿಯಲ್ಲಿ ಖಂಡಿತಾ  ನೂರು ರಾಪಾಯಿಗೆ ಅಷ್ಟೇ  ಕೆಲಸ ಮಾಡಿಸಬಹುದು  ಎನ್ನುವ  ದೈರ್ಯ  ನನಗುಂಟು.  ಆದರೆ  ಕಮ್ಮಾರನ ಜತೆ ಕೂತು    ಇದರ ವಿನ್ಯಾಸ    ಹಾಗೂ  ಕೆಲಸವರಿಗೆ  ತರಬೇತಿ  ನನ್ನ  ಇಂದಿನ  ಆರೋಗ್ಯದಲ್ಲಿ  ಅಸಾದ್ಯ. :(  ಆದರೆ  ಕತ್ತಿ  ಬೀಸಲು  ನಮ್ಮ  ಹಳ್ಳಿಗಳಲ್ಲಿ     ಜನವೇ  ಇಲ್ಲದಿರುವ  ಕಾರಣ  ಗುತ್ತಿಗೆದಾರರನ್ನು  ಹಿಡಿಯಬೇಕಾದ್ದು  ಅನಿವಾರ್ಯ. :) 


ಮೇಳದಲ್ಲಿ ಕಂಡ  ಧಾನ್ಯ ಪುಡಿಮಾಡುವ ಯಂತ್ರದ  ಚಿತ್ರ  ರಮೇಶ್  ದೇಲಂಪಾಡಿ   ಮುಖಪುಟದಲ್ಲಿ   ಹಾಕಿದ್ದು.    ಇದರಲ್ಲಿ   ದ್ರವರೂಪದ  ಸಾರಜನಕವನ್ನು  ಪರೋಕ್ಷ ತಂಪುಕಾರಕವಾಗಿ ಇಲ್ಲಿ ಉಪಯೋಗಿಸಲಾಗುತ್ತದೆ.   ಹೀಗಾಗಿ ಧಾನ್ಯ ಪುಡಿಯಾಗುವಾಗ ಬಿಸಿಯಾಗುವುದು ತಪ್ಪುತ್ತದೆ.ಆದರೆ ಮನೆ ಮನೆಯ ಬಳಕೆಗೆ ಅಲ್ಲ.ಸಣ್ಣ ಕೈಗಾರಿಕೆಗಳಿಗೆ ಸೂಕ್ತ. ಅಂತ   ವರದಿ ಓದಿದೆ.  ಬೀಸುವ ಬದಲು ಗುದ್ದುವ ತಂತ್ರದಲ್ಲಿ ದಾನ್ಯ ಬಿಸಿಯಾಗುವುದರ ತಡೆಗಟ್ಟುವುದು ಹೆಚ್ಚು ಸರಳ. ಆದರೆ ಏನಾದರೂ ಗಿಮಿಕ್    ಇಲ್ಲವಾದರೆ ಯಂತ್ರ ಕುತೂಹಲ ಮೂಡಿಸುವುದಾದರೂ ಹೇಗೆ. ;)  

ಅಲ್ಲದೆ  ಸರಳ  ಕುಟ್ಟುವ  ಯಂತ್ರದಲ್ಲಿ  ಬತ್ತ ಕುಟ್ಟಿ  ಅಕ್ಕಿ ಮಾಡಲೂ  ಬಹುದು.  ಅವಲಕ್ಕಿ  ಮಾಡಬಹುದು.    ನಮ್ಮಲ್ಲಿ ಏನೂ  ಸಾದನೆ  ಇಲ್ಲ  ಎಂದು ನಾನು   ಅನ್ನುವುದಿಲ್ಲ.   ಪ್ರಯತ್ನ   ಸಾಲದು ಎನ್ನುವೆ.  ಸೇಮಿಗೆ  ಯಂತ್ರಕ್ಕೆ  ಗೇರು   ಹಾಗೂ   ಹಿಟ್ಟು  ತುಂಬುವ  ಕೊಳವೆ    ಉದ್ದ ಮಾಡಿ  ಮೊಟರ್  ಅಳವಡಿಸಿ   ಈಗ  ದೊಡ್ಡ  ಮಟ್ಟದಲ್ಲಿ  ತಯಾರು ಮಾಡಿ   ಕಾರ್ಯಕ್ರಮಗಳಿಗೆ   ಪೊರೈಸುವ   ಗುತ್ತಿಗೆಯವರಿದ್ದಾರೆ. 



ಹೊಂಡ  ಮಾಡಲು  ಹೊಂಡ ಇಂಜೀನು  ಬಹಳ  ಅಗತ್ಯವೇನಲ್ಲ.   ಯುರೋಪು  ಅಮೇರಿಕದ  ಕೃಷಿ  ಕ್ಷೇತ್ರಗಳಲ್ಲಿ  ಮೇಲ್ಕಾಣುವಂತಹ    ಕೈಯಲ್ಲಿ  ತಿರುಗಿಸಬಹುದಾದ   ಸಲಕರಣೆ ನೋಡಿದ್ದೇನೆ.    ಅದರ  ಒಂದು    ಮುಖ್ಯ  ಉಪಯೋಗ  ಬೇಲಿ ಕಂಬ  ಊರಲು  ಸರಿಯಾಗುವ  ಹೊಂಡ.    ತಯಾರಕರ    ಹೇಳಿಕೆ ಪ್ರಕಾರ  ಆರು ಇಂಚು ಅಗಲ ಎರಡು ಅಡಿ ಆಳದ   ಹೊಂಡ  ಮಾಡಬಹುದು.  ನನ್ನಲ್ಲಿದ್ದ   ನಾನೇ  ತೆಗೆದ    ಚಿತ್ರ  ಸದ್ಯಕ್ಕೆ  ನನ್ನ  ಕೈ ಎಟಕಿನಲ್ಲಿ ಇಲ್ಲದಿರುವುದರಿಂದ    ಮೇಲಿನ  ಚಿತ್ರ  ಜಾಲತಾಣ  ಒಂದರಿಂದ    ಎಗರಿಸಿದ್ದು.  ಹಾಗಾಗಿ ಸಂಪರ್ಕ ಕೊಂಡಿ ಹಾಕುತ್ತಿಲ್ಲ. :(  ಕ್ರಯ   ಸುಮಾರು  ೨೦ ಇಂಗ್ಲೇಂಡಿನ  ಪೌಂಡ್  ಕ್ರಯ  ಅಂದರೆ  ಸಾವಿರದ  ಆರು ನೂರು ರೂಪಾಯಿ.  

ಅಂದು    ಗಟ್ಟಿ ಮಣ್ಣಿಗೆ  ಹೇಗಾಗುವುದೋ   ಸಂಶಯ ಇತ್ತು.    ಮೆದು  ಮಣ್ಣಿನಲ್ಲಿ  ಆರಾಮವಾಗಿ  ಶ್ಯಾವಿಗೆ ಯಂತ್ರ  ತಿರುಗಿಸಿದಂತೆ  ತಿರುಗಿಸಿ   ನಾಲ್ಕು  ಐದು ಇಂಚು  ಅಗಲದ  ಗುಂಡಿ  ಸುಲಬವಾಗಿ   ಮಾಡಬಹುದು  ಅನ್ನಿಸಿತ್ತು.    ಯಂತ್ರವೇ   ಆಗಬೇಕೆನ್ನುವವರಿಗೆ   ಇದೇ  ಉಪಕರಣ  ಸರಳ   ಯಂತ್ರವನ್ನಾಗಿಯೂ   ಮಾಡಬಹುದು.   ಆ  ತಿರುಗಣಿ  ಬ್ಲೇಡು  ಹಾಗೂ  ನಮ್ಮ  ಸೇವಿಗೆ  ಯಂತ್ರದ  ರಚನೆಯ  ಹಿಡಿ.  ಇದನ್ನು   ಚಕ್ರ ಇರೋ  ಗಾಡಿ ಮೇಲೆ  ಅಳವಡಿಸಿದರೆ  ಆಯಿತು.  ಗುಂಡಿ  ತೋಡುವಲ್ಲಿ    ಒಬ್ಬ  ಒತ್ತಿ ಹಿಡಿತಾನೆ.   ಇನ್ನೊಬ್ಬ  ತಿರುಗಿಸ್ತಾನೆ.  ಲಿವರೇಜಿಗೆ ಬೇಕಾದರೆ  ಉದ್ದ  ಪೈಪು  ಉಪಯೋಗಿಸಿದರಾಯಿತು.   ನಮ್ಮಲ್ಲಿ ಮಳೆಗಾಲ  ಪ್ರಾರಂಬವಾದಾಗ   ಗುಂಡಿ  ತೋಡಲು   ಜನ  ಸಿಕ್ಕದೆ  ನನ್ನ   ಕಾಡು ಬೆಳೆಸುವ ಹುಚ್ಚು  ಕನಸಿನಲ್ಲೇ  ಉಳಿದಿದೆ.  ಬೆರ್ಮುಡಾ  ಹಾಕಿ ಮಾಡಬಹುದಾದ ಕೆಲಸವಾದರೆ     ಸಂಬಳ  ಕಡಿಮೆಯಾದರೂ  ನಮ್ಮ ಹಳ್ಳಿಹುಡುಗರು  ಖಂಡಿತಾ    ಒಪ್ಪಿಕೊಳ್ಳುತ್ತಾರೆ.

ಕನ್ನಡ  ಪ್ರಭ ಅಂಕಣದಲ್ಲಿ  ಅಡಿಕೆ ಪತ್ರಿಕೆಯ   ನಾ.  ಕಾರಂತರು  ಬರೆದ  ವಾಕ್ಯಗಳು  ಗಮನ  ಸೆಳೆದವು.  -    ಎಲ್ಲರೂ  ಸಬ್ಸಿಡಿ  ಉಂಟಾ  ಕೇಳುವವರೇ.  ಯಂತ್ರದ  ನಿಜ ಬೆಲೆ  ಹೇಳಿದರೆ  ಸಬ್ಸಿಡಿ ಬೇಕೇ ಬೇಕು  ಎನ್ನುತ್ತಾರೆ  ವಿಟೆಕ್  ವಿಶ್ವನಾಥ್.  ಸಬ್ಸಿಡಿ ಮತ್ತು ಮೀಸಲಾತಿ ತೊಲಗದೆ  ಬಾರತ  ಉದ್ದಾರವಾಗದು  ಎನ್ನುತ್ತಾರೆ  ಕೃಷಿಕ  ಡಾ ತಿರುಮಲೇಶ್ವರಯ್ಯ  ಗಬ್ಲಡ್ಕ. 

ನನ್ನ   ಆತ್ಮೀಯ  ಗೆಳೆಯರೊಬ್ಬರು  ಅಮೇರಿಕದ  ಪೆನ್ಸಿಲ್ವಾನಿಯದಲ್ಲಿ   ಕುದುರೆಗಳ  ಸಹಾಯದಿಂದ  ಕೃಷಿ  ಮಾಡುತ್ತಾರೆ.    ನೂರು ವರ್ಷ  ಹಳೆಯ  ಕೆಲವು  ಯಂತ್ರೋಪಕರಣಗಳನ್ನೂ    ಬಳಸುತ್ತಾರೆ.   ಬೀಡು ಕಬ್ಬಿಣದಿಂದ  ಮಾಡಿದ ಅವು  ತುಕ್ಕು  ಹಿಡುಯುವುದೇ  ಇಲ್ಲ.  ಅವರಿಗೆ   ಅಂದರೆ  ಎರಿಕ್  ಮತ್ತು  ಅನ್  ಇಬ್ಬರಿಗೂ    ಕೃಷಿ  ಹಿನ್ನೆಲೆ  ಇರಲಿಲ್ಲ.  ಪ್ರಾರಂಬದಲ್ಲೊಂದು   ಟ್ರಾಕ್ಟರ್  ಕೊಂಡಿದ್ದರು.    [ನಮ್ಮಲ್ಲೂ   ಅಧುನಿಕ    ಕೃಷಿಗೆ  ಹೊರಡುವವ   ಮೊದಲು   ಕತ್ತಿ  ಬದಲಿಗೆ   ಟ್ರಾಕ್ಟರ್ ಕೊಂಡರೆ  ಸಾಫ್ಟ್ ವೇರ್  ಲಕ್ಷಾದೀಶ  ಪ್ರಥಮ  ಸಂಬಳದಲ್ಲಿ ಕಾರು ಕೊಳ್ಳುತ್ತಾನೆ]     ನಂತರ  ಅದಕ್ಕೆ  ಕೆಲಸವೇ  ಇಲ್ಲವೆಂದು  :( ಎರಿಕ್ - ಅನ್  ಅರಿತು   ಮಾರಿಬಿಟ್ಟರು.   ನಾವು   ದೊಡ್ಡ ಯಂತ್ರಗಳ  ಮೊದಲು  ಅಲ್ಲಿ   ಬಳಕೆಯಲ್ಲಿದ್ದ     ಇಂತಹ  ಮಾದರಿಗಳ  ಹುಡುಕಬೇಕಾದ್ದು  ಹೊರತು  ಅತ್ಯಾದುನಿಕ  ದುಬಾರಿ  ಆಲೋಚನೆಗಳನ್ನಲ್ಲ



ಹಿಂದೆ  ಗೊಬ್ಬರದ  ರಾಶಿಯಲ್ಲಿ ಹಂದಿಗಳು  ಎಂದು  ಇವರ  ಒಂದು  ಪ್ರಯೋಗದ  ಬಗೆಗೆ  ಬರೆದಿದ್ದೆ. ಅಲ್ಲೂ  ಗೊಬ್ಬರ  ಮೊಗಚಿಹಾಕಲು   ಟ್ರಾಕ್ಟರ್  ಚಾಲಿತ  ದುಬಾರಿ  ಯಂತ್ರಗಳೂ   ಲಭ್ಯ.  ಆದರೆ  ಹಂದಿಗಳು  ಬಹು ಚೆನ್ನಾಗಿ   ಆ  ಕೆಲಸ ಮಾಡುತ್ತದೆ.  ನಾವು ಹುಡುಕಬೇಕಾದ್ದು ಇಂತಹ  ಮಾದರಿಗಳನ್ನು. 


ನನ್ನ  ನೋಡಿಕೊಳ್ಳುತ್ತಿರುವ  ಗಿರಿಯಪ್ಪನ  ಹತ್ತಿರವೊಂದು ಮಾರ್ಪಾಡಿಸಿದ  ಪಿಕ್ಕಾಸು ಉಂಟು. ಕುಂಟು  ಹಾಗೂ   ಅಗಲಬಾಯಿಯಾದ  ಕಾರಣ   ನೆಲದಲ್ಲಿರುವ  ಕುತ್ತಿ ಇತ್ಯಾದಿ ತೆಗೆಯಲು  ತುಂಬಾ   ಸಹಾಯಕ.    ಊರ  ಕಮ್ಮಾರರಲ್ಲಿಯೇ  ಮಾಡಿಸಿದ್ದು.  ಅದಕ್ಕೆ  ಪುರುಸೊತ್ತೆ  ಇರುವುದಿಲ್ಲ. ಸುತ್ತುಮುತ್ತಲಿನವರೆಲ್ಲ   ಕೊಂಡು ಹೋಗುತ್ತಿರುತ್ತಾರೆ.   ನಮಗೆ  ಬೇಕಾದ್ದು  ಇಂತಹ  ತಳಮಟ್ಟದ  ಪ್ರಯತ್ನಗಳು.   ಯಂತ್ರ ಮೇಳದಲ್ಲಿ    ಹೆಚ್ಚು ಗಮನಸೆಳೆಯಬೇಕಾಗಿದ್ದ    ಸಮೀರರ  ಹಾಗೂ  ಉಪಾದ್ಯರ  ಉಪಕರಣಗಳ  ಬಗೆಗೆ  ಜನರ ಕುತೂಹಲ  ಎಷ್ಟಿತ್ತು  ಎಂದು  ಅಶೋಕವರ್ಧನರು  ಚೆನ್ನಾಗಿ ವಿವರಿಸಿದ್ದಾರೆ.  http://www.athreebook.com/2012/11/blog-post_12.html#more


ಅಶೋಕವರ್ಧನರು ಬರೆಯುತ್ತಾರೆ -ದಾರಿ ತಪ್ಪಿದ ಶಿಕ್ಷಣ ಮತ್ತು ಮೌಲ್ಯರಹಿತ ಸಾಮಾಜಿಕ ಭದ್ರತೆಗಳುರೂಢಿಸಿಹೋಗಿ ಇಂದು ನಾವು ಯಾವುದೇ ವೃತ್ತಿರಂಗಕ್ಕೆ ಹೋದರೂಪ್ರಾಥಮಿಕ ಹಂತದಿಂದ ಕಲಿಯಬೇಕಾಗಿದೆಈ ಕಾರಣಕ್ಕೆ ಕೃಷಿಹಿನ್ನೆಲೆಯಿಂದಲೇ ಬಂದವರೂ ಇಂದು ಕೃಷಿಯಲ್ಲಿ ಮುಂದುವರಿಯುವುದಾದರೆಅಸಾಮಾನ್ಯ ಕೊರತೆಗಳುಆತಂಕಗಳು ಕಾಡುತ್ತವೆಅವನ್ನು ಗ್ರಹಿಸಿ,ಚರ್ಚಿಸಿರೂಪಿಸಿರೂಢಿಸಿಕೊಡುವಂಥ ಯಂತ್ರ ಪರಿಣತರು ಮೇಳಕ್ಕೆಬರಬೇಕಿತ್ತು.  ಆದರೆ  ಇಂತಹ  ಸ್ಪೂರ್ತಿ ಕೊಟ್ಟು  ಮುನ್ನಡೆಸುವ   ಪರಿಣಿತರು  ನಮ್ಮಲ್ಲಿದ್ದರೋ  ಅನ್ನುವ  ಸಂಶಯ  ನನಗೆ.   ಯಾಕೆಂದರೆ   ಅಧುನಿಕ  ಶಿಕ್ಷಣ ಪಡೆದವರೆಲ್ಲ   ಮಾದರಿಗೆ    ಅಮೇರಿಕದ  ಕಡೆ ಮುಖಮಾಡಿರುತ್ತಾರೆ.

ಪ್ರೋಜೆಕ್ಟ್  ವರ್ಕ್  ಸಮಯದಲ್ಲಿ  ನನ್ನಲ್ಲಿಗೆ  ಹಲವು ವಿದ್ಯಾರ್ಥಿಗಳು ಸಮಾಲೋಚನೆಗೆ  ಬಂದದ್ದುಂಟು.   ಆ  ಚರ್ಚೆಗಳಲ್ಲಿ  ಅವರ  ಮತ್ತು ಅವರ  ಮಾರ್ಗದರ್ಶಿಗಳ  ಚಿಂತನೆ ಅರ್ಥವಾಗುತ್ತದೆ.      ಮಾಸ್ ಪ್ರೊಡಕ್ಟನ್, ವಿಸಿಟಿಂಗ್ ಕಾರ್ಡ್   ನುಡಿಮುತ್ತು ಉದುರಿಸುವ    ಪ್ರೊಫೆಸರುಗಳು  ಮಾರ್ಗದರ್ಶಕರು,  ನಿರ್ಣಾಯಕರು. :(   ಸ್ವಾಭಾವಿಕವಾಗಿ    ಹೆಚ್ಚಿನ  ಪ್ರೊಜೆಕ್ಟ್ ವರ್ಕ್ ನಿಷ್ಪ್ರಯೋಜಕ.   ವಿದ್ಯಾರ್ಥಿಗಳ    ಸಾಮಾನ್ಯ   ವಾದ ಸರಣಿ  -  ನಾವು ಮೆಕಾನಿಕಲ್  ವಿಬಾಗದವರು.  ಹಾಗೆ  ಒಂದು ಪೆಟ್ರೊಲ್  ಇಂಜಿನ್ ಜೋಡಿಸಿದ  ಯಂತ್ರದ  ಮಾರ್ಪಾಡಿಗೆ  ಆಸಕ್ತಿ ಹೊಂದಿದ್ದೇವೆ   ಎನ್ನುವ  ಪೂರ್ವಾಗ್ರಹ  ತುಂಬಿದ  ಮನಸ್ಸಿನಲ್ಲಿಯೇ  ಬಂದಿರುತ್ತಾರೆ.    ನೈಜ  ಸಾಧನೆ  ಬಗೆಗೆ  ಅವರಿಗೆ  ಆಸಕ್ತಿ  ಇರುವುದೇ  ಇಲ್ಲ.


ಅಧುನಿಕ   ಕೃಷಿ ವಿಜ್ಞಾನ   ಅಂದರೆ   ಕೃಷಿ  ಒಳಸುರಿ  ಮಾರುಕಟ್ಟೆ    ಮಣ್ಣಿನ  ಫಲವತ್ತತೆ  ನಿರಾಕರಿಸುತ್ತದೆ.   ಹೌದು. ಒಳಸುರಿ  ಮಾರುಕಟ್ಟೆಯನ್ನೇ   ಕೃಷಿ  ವಿಜ್ಞಾನ   ಎಂದು  ನಂಬತೊಡಗಿದ್ದೇವೆ.      ಮಣ್ಣಿರುವುದು  ಬರೇ  ಗಿಡಗಳ  ಹಿಡಿದಿಡಲು.   ಅವಶ್ಯ    ಒಳಸುರಿ  ಬುದ್ದಿವಂತ    ರೈತ   ಬಳಸುತ್ತಾನೆ.  ವಿಜ್ಞಾನಿ  ಎಂದರೆ  ಇಲ್ಲಿ     ಕಂಪೇನಿಗಳ  ಮುಖವಾಡ  ಮತ್ತು   ಬುದ್ದಿವಂತ  ರೈತ  ಅವುಗಳ  ಪ್ರಚಾರಕ್ಕೆ  ಸಿಕ್ಕಿ ಬಿದ್ದ  ಬಕ್ರಾ.   ಸಾವಯುವ  ಕೃಷಿ ಮಣ್ಣಿನ  ಸಮತೋಲನಕ್ಕೆ ಹೆಚ್ಚು  ಒತ್ತು ಕೊಡುತ್ತದೆ.    ಹಾಗೆ  ಇಂದು  ಕೃಷಿ  ಮಾಡಲು ಯಂತ್ರಗಳು  ಬೇಕೆ ಬೇಕು ಎಂದು ನಂಬಿದ್ದೇವೆ   ಅಥವಾ  ನಮ್ಮನ್ನು  ನಂಬಿಸಿದ್ದಾರೆ  ಅನ್ನಬಹುದು. :)


ದೇಹದ  ನೈಸರ್ಗಿಕ    ಚಲನೆಗೆ  ಅನುಗುಣವಾಗಿ  ಕೆಲಸ ಮಾಡುವಂತೆ    ಉಪಕರಣ  ರಚನೆಯಾಗಬೇಕು.  ಪರದೇಶಗಳಲ್ಲಿ  ಉಪಯೋಗಿಸುವ ಕೊಟ್ಟು  ಓಡಿಬಂದು ಹಾರುವಂತೆ  ಮಣ್ಣು ಎತ್ತಿ ಎಸೆಯುವ  ರೀತಿ  ರೂಪಿಸಿದ್ದಾರೆ.  ನಮ್ಮಲ್ಲಿ  ಕಾಂಕ್ರೀಟ್  ಕೆಲಸಗಳಿಗೆ   ಅಂತಹದನ್ನು ಉಪಯೋಗಿಸುತ್ತಾರೆ.    ಮಣ್ಣಿನ  ಕೆಲಸಕ್ಕೆ     ನಮ್ಮಲ್ಲಿ  ಪೂರ್ತಿ ಶಕ್ತಿ  ಹಾಕಿಯೇ  ಎಳೆಯಬೇಕು.  ಇದನ್ನು  ಬದಲಾವಣೆ ಸಾದ್ಯವೋ ?  ಜನ  ಒಪ್ಪುತ್ತಾರೋ  ಚಿಂತನೆಯೋಗ್ಯ  ಅನಿಸುತ್ತದ.


ಈಗ   ಪೇಟೆಯ  ಹೆಂಗಸರರಿಗೆ  ಕಸ ಗುಡಿಸಲು ಬಗ್ಗ ಬೇಕಾಗಿಲ್ಲ,  ನೆಲ ಒರಸಲು ಕೂರಬೇಕಾಗಿಲ್ಲ.    ಮಾಲುಗಳಲ್ಲೂ     ….   :) ಆದರೆ  ಹಳ್ಳಿಯವರಿಗೆ  ಬಗ್ಗಿ ಮಾಡುವ  ಕೆಲಸಗಳಿಗೆ  ಪರಿಹಾರಗಳಿನ್ನೂ  ತಲಪಲಿಲ್ಲ. :(   ಇಲ್ಲೂ  ನಮಗೆ   ಈಗ  ಅತಿ ಅಗತ್ಯವೆನಿಸುವುದು   ಪೆಟ್ರೊಲ್  ಯಂತ್ರಗಳಲ್ಲ.  ಸರಳ    ಉಪಕರಣಗಳು.   ಇವೆಲ್ಲ  ನಮ್ಮವರೇ  ಕೂತು ಚಿಂತಿಸಬೇಕಾದ್ದು  ಹೊರತು  ಹೊರಗಿನ  ಆಲೋಚನೆ ಪ್ರಯೋಜನವಿಲ್ಲ.   

ವೈಯುಕ್ತಿಕ  ಕಾರಣಗಳಿಂದಾಗಿ   ಕೃಷಿಯಿಂದ  ನಿವೃತ್ತನಾದ   ನಾನು ಯಂತ್ರ ಮೇಳಕ್ಕೆ  ಹೋಗಲಿಲ್ಲ. 
ಕೆಲವು ವಿಚಾರಗಳಲ್ಲಿ    ಗೊಂದಲಗಳಿದ್ದೂ  ಬರಹಕ್ಕಿಳಿಸಿದ್ದೇನೆ.    ಕೆಲವೆಡೆ   ಶಬ್ದ ಪ್ರಯೋಗಗಳೂ  ತಪ್ಪಿರಬಹುದು.  ಯಂತ್ರಗಳೇ  ಬೇಡ  ಎಂದು ನಾನು ಹೇಳುವುದಲ್ಲ, ಅವುಗಳ   ಬಗೆಗೆ  ಇರುವ   ಅತಿರೇಕದ ಭ್ರಮೆಯಿಂದ ಹೊರ ಬಂದು  ಚಿಂತಿಸುವ.   ಸಾರ್ವಜನಿಕೆ  ಸಾರಿಗೆ  ಬೇಕು.  ದಿನಕ್ಕೆ  ಇಪ್ಪತ್ತೆರಡು ಗಂಟೆ  ತುಕ್ಕು ಹಿಡಿಯುತ್ತಾ  ಕೂತಿರುವ  ವೈಯುಕ್ತಿಕ  ಕಾರು ಉಪಯೋಗ  ಕಡಿಮೆಯಾಗಬೇಕು   ಎನ್ನುವ  ಚಿಂತನೆ  ನನ್ನದು.  ಅದೇ  ರೀತಿ  ನಮ್ಮ  ಕೈಗೆಟಕುವ  ಸರಳ  ಉಪಕರಣಗಳು   ಹೆಚ್ಚೆಚ್ಚು     ಬರಲಿ  ಅನ್ನುವ  ಅಭಿಲಾಷೆ.  

2 comments:

ramesh delampady said...

ಮಾಮೂಲಿಗಿಂತ ಭಿನ್ನವಾದ ಆದರೆ ಗಟ್ಟಿ ನೆಲೆಯಲ್ಲಿ ನಿಂತ ವಿಚಾರಧಾರೆಗಲಿಂದ ಕೂಡಿದ ಬರಹ.ಇಷ್ಟವಾಯಿತು.ನೀವು ಕೊಟ್ಟ ಲಿಂಕ್ ಗಳನ್ನೂ ನೋಡಿದೆ.ಅಲ್ಲೂ ಇದೇ ರೀತಿಯ ವಿಚಾರಧಾರೆ.ನಿಜ ,ನನ್ನ ವಿಚಾರಗಳು ಸ್ವಲ್ಪ ಭಿನ್ನವಾಗಿವೆ.ಕ್ರಿಷಿಯಲ್ಲಿ ಯಾಂತ್ರೀಕರಣವನ್ನು ಅನಿವಾರ್ಯ ಮತ್ತು ಆವಶ್ಯಕ ಎಂದು ಭಾವಿಸಿದ್ದೇನೆ.ನಾನು ಸಂಪೂರ್ಣ ಕ್ರಿಷಿಕ.ಆದರೆ ಕೈಗಾರಿಕೆಗಾಗಿಯೇ ನಿರ್ಮಿತವಾದ ಯಂತ್ರಗಳನ್ನು ಕ್ರಿಶಿಗಾಗಿ ಬಳಸಿಕೊಳ್ಳುವುದು ತಪ್ಪಿ ಹೋಗಿ ಕ್ರಿಷಿಗಾಗಿಯೇ ಯಂತ್ರಗಲು ನಿರ್ಮಾಣವಾಗಬೇಕು ಎಂದು ನಾನು ನಂಬುತ್ತೇನೆ.

subbanna said...

ತು೦ಬಾ ತರ್ಕಬಧ್ಧ ಬರಹ, ಆದರೆ ವಾಸ್ತವ ಅನೇಕ ಬಾರಿ ತರ್ಕಕ್ಕೆ ನಿಲುಕುವುದಿಲ್ಲ, ಮತ್ತು ನಾವು ತಾರ್ಕಿಕವಾಗಿ ನಡೆದುಕೊಳ್ಳುವುದಿಲ್ಲ. ಪ್ರಸ್ತುತ ಮನುಷ್ಯತ್ವ,ವಿಶ್ವದ ಪರಿಸರ, ದೇಶ ವಿದೇಶಗಳ ನಾಗರಿಕತೆಯ ನಾಯಕತ್ವ, ಇತ್ಯಾದಿ ನನ್ನಲ್ಲಿ ಬಹಳ ಭರವಸೆ ಹುಟ್ಟಿಸುತ್ತಿಲ್ಲ, ಹೋಲಿಕೆಯಲ್ಲಿ ಕೃಷಿ, ಮತ್ತು ನಮ್ಮ ಊರಲ್ಲಿನ ಕೃಷಿ ಯಾ೦ತ್ರೀಕರಣ, ನಿರಾಶಾದಾಯಕವಾಗಿಲ್ಲ.
ನೀವು ಹೇಳಿರುವ೦ತೆ ನಾವು ಕೃಷಿ ಯಾ೦ತ್ರೀಕರಣವನ್ನು ಕುರುಡಾಗಿ ಅನುಕರಿಸುತ್ತಿದ್ದೇವೆ ನಿಜ, ಆದರೆ ಸಿಧ್ಧಮಾದರಿಯನ್ನು ನಮ್ಮ ಅವಶ್ಯಕತೆಗೆ ತಕ್ಕ೦ತೆ, ನಿಧಾನವಾಗಿ ಮಾರ್ಪಾಡು ಮಾಡುತ್ತಲೂ ಇದ್ದೇವೆ, ಅವು ಕೆಲ ಸಮಯದ ಹಿ೦ದಿಗಿ೦ತ ಈಗ ಬಲು ಸೂಕ್ತವಾಗಿರುವುದೂ ಸತ್ಯ, ಮತ್ತು ಇವುಗಳ ಜೊತೆಗೇ, ಕೆಲವೊ೦ದು ಬೆಚ್ಚಿಬೀಳಿಸುವಷ್ಟು ಉಪಯುಕ್ತವಾದ ಹೊಸ ಸಲಕರಣೆ / ಯ೦ತ್ರಗಳನ್ನೂ ಅಭಿವೃಧ್ಧಿಪಡಿಸುತ್ತಿದ್ದೇವೆ. ಮಾರ್ಪಾಡು ಕೆಲಸ ನಿಧಾನವಾಗಿ ಸಾಗುತ್ತಿದೆ, ಚುರುಕಾಗಬೇಕು,ನಮ್ಮ ನೆಲ,ಜಲ,ಪಧ್ಧತಿಗೆ ಹೊ೦ದುವ೦ತೆ, ಸುಸ್ಥಿರ ಇರುವ೦ತೆ ಆಗಬೇಕು ನಿಜ, ಆದರೆ ಈ ಯಾ೦ತ್ರೀಕರಣದ ಧಾಟಿಯನ್ನು ಸಾರಾಸಗಟಾಗಿ ತಿರಸ್ಕರಿಸುವ೦ತೆ ನಿರಾಶಾದಾಯಕ ಸ್ಥಿತಿ ಇದೆ ಎ೦ದು ಒಪ್ಪಲಾಗದು.
ನೀವು ಹಾಕಿದ ರಟ್ಟೆ - ಯ೦ತ್ರ ಬಲಗಳ ಹೋಲಿಕೆಯ ವಿಡಿಯೋ ಗಮನಾರ್ಹವಾದರೂ, ಪ್ರಸಕ್ತ ರಟ್ಟೆ ಬಲದ ಮೇಲಿನ ಅವಲ೦ಬನೆ ಅದು ಎಷ್ಟೇ ದಕ್ಷವಾಗಿದ್ದರೂ ಅಸಾಧ್ಯ ಎನ್ನುವ ಹ೦ತ ತಲುಪಿರುವುದು ನಿಮಗೆ ತಿಳಿಯದ ಸ೦ಗತಿ ಏನಲ್ಲ.
ಕೃಷಿ ಯ೦ತ್ರಮೇಳ ಒ೦ದು ಗೌಜಿ ಗದ್ದಲದ ಜಾತ್ರೆಯಾಗಿತ್ತು , ಅದು ಹಾಗೆಯೇ ಇರಬೇಕು, ಜೀವನವೇ ಒ೦ದು ಜಾತ್ರೆಯ೦ತೆ ಅಲ್ಲವೇ ? ಹತ್ತರಲ್ಲಿ ಒ೦ದೋ ಎರಡೋ ಸಿಕ್ಕಿದರೂ ಆರಿಸಿಕೊಳ್ಳುವ೦ತಿದ್ದರೆ, ಸ೦ತೋಷ. ಯಾವುದನ್ನೂ ಬಲವ೦ತದಿ೦ದ ಹೇರದಿದ್ದರೆ ಸಾಕು, ಆಯ್ಕೆ ಕುರಿತು ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ೦ತೆ ಪ್ರೇರೇಪಿಸಬೇಕು, ಮತ್ತು ಮೇಳ ಬಹು ಭಾಗ ಹಾಗಿತ್ತು. ಇದು ನವ ಬಳಕೇದಾರರ ಆಶಯ ಮಾತಿನ೦ತೆಯೇ ಇದೆ ಅಲ್ಲವೇ, ಹೌದು, ನಮ್ಮ ಬಹ್ವ೦ಶ ನಡವಳಿಕೆ, ಆಗು ಹೋಗುಗಳೂ ಅದರ೦ತೆಯೇ ಇವೆ, ಅದರಿ೦ದ ನಾವು ಅತೀತರಲ್ಲ. ಪಳೆಯುಳಿಕೆ ಇ೦ಧನ ಬಳಸದ ಯ೦ತ್ರಕ್ಕೆ/ಸಲಕರಣೆಗೆ ಆದ್ಯತೆ ನೀಡುವುದು ಸುಯೋಗ್ಯ, ಆದರೆ ಬಹಿಷ್ಕರಿಸಬೇಕು ಎ೦ಬಷ್ಟು ತೀವ್ರ ಹೇಳಿಕೆ ಅತಾರ್ಕಿಕ ಮಾತ್ರವಲ್ಲ, ವಾಸ್ತವಕ್ಕೆ ಕಣ್ಣುಮುಚ್ಚಿದ೦ತೆ ಆಗುತ್ತದೆ, ಮತ್ತು ದೂರ ಹೋಗುತ್ತದೆ. ಕಾಲದಲ್ಲಿ ನಾವು ಮು೦ದಕ್ಕೆ ಸಾಗಬಲ್ಲೆವು, ಹಿ೦ದಕ್ಕಲ್ಲ, ಹಾಗಾಗಿ ಪಳೆಯುಳಿಕೆ ಇ೦ಧನದ ಎಗ್ಗಿಲ್ಲದ ಬಳಕೆ ಜೀವನದ ಎಲ್ಲ ರ೦ಗಗಳಲ್ಲಿ ಸಾಗಿರುವಾಗ, ಕೃಷಿರ೦ಗದಲ್ಲೂ ಅ೦ತಹುದೇ ಅವಲ೦ಬನೆ ಸಹಜ. ಎಲ್ಲ ರ೦ಗಗಳಲ್ಲಿ ನಡೆಯುವ೦ತಾ ಆಶಾದಾಯಕ / ನಿರಾಶಾದಾಯಕ ಬೆಳವಣಿಗೆ ಇಲ್ಲೂ ಇರಬಹುದಾದುದು ತಾರ್ಕಿಕ ಅಲ್ಲವೇ ? ನಿ ನಿಮ್ಮ ಬರಹದ ಕೊನೆಯ ಭಾಗ ನಿಮ್ಮ ನೈಜ ಆಶಯ ಎ೦ದು ನಾನು ಬಲ್ಲೆ, ಮತ್ತು ಅದನ್ನು, ನಮ್ಮ ನಮ್ಮ ಮಿತಿಯಲ್ಲಿ ಆಳವಡಿಸಿಕೊಳ್ಳುವುದು ಮನುಷ್ಯತ್ವದ ಉಳಿವಿಗೆ ಅಗತ್ಯ. ನಾಗರಿಕತೆ ಆ ದಿಕ್ಕಿನಲ್ಲಿ ಸಾಗುವ ವಿವೇಕ ಉಳಿಸಿಕೊಳ್ಳಲಿ.